ಹಿಂದೂ
 	ಭಾರತದ ಅಂತಾರಾಷ್ಟ್ರೀಯಮಟ್ಟದ ಇಂಗ್ಲಿಷ್ ದಿನಪತ್ರಿಕೆ. 1878 ಸೆಪ್ಟಂಬರ್ 20ರಂದು ಈ ಪತ್ರಿಕೆಯನ್ನು ಮದರಾಸಿನಲ್ಲಿ ಪ್ರಾರಂಭಿಸಲಾಯಿತು. ಟ್ರಪ್ಲಿಕೇನ್ ಸೊಸೈಟಿಯ ಸಮಾಜ ಸುಧಾರಕ ತಂಡದ ಆರುಜನ ಸದಸ್ಯರುಗಳಾದ ಜಿ. ಸುಬ್ರಮಣ್ಯಅಯ್ಯರ್, ಎಂ.ವೀರರಾಘವಾಚಾರಿಯರ್, ಪಿ.ಪಿ.ರಂಗಾಚಾರಿಯರ್, ಪಿ.ವಿ.ರಂಗಾಚಾರಿಯರ್, ಡಿ.ಕೇಶವರಾವ್ ಪಂತ್ ಮತ್ತು ಎನ್.ಸುಬ್ಬರಾವ್ ಪಂತುಲು-ಈ ಪತ್ರಿಕೆಯನ್ನು ಆರಂಭಿಸಿದರು. ಬ್ರಿಟಿಷ್ ಒಡೆತನದ ಪತ್ರಿಕೆಗಳ ವಿವಾದಾತ್ಮಕ ವರದಿಗಳನ್ನು ವಿರೋಧಿಸಲು ಹುಟ್ಟಿಕೊಂಡ ಇದು ಮೊದಲು ವಾರಪತ್ರಿಕೆಯಾಗಿತ್ತು. ಆರಂಭಿಕ ಬಂಡವಾಳವಾಗಿ ಪ್ರತಿಯೊಬ್ಬರೂ 1 ರೂಪಾಯಿ 12 ಆಣೆ ಹಾಕಿದ್ದರು. 1883 ಅಕ್ಟೋಬರ್ 1ರಿಂದ ತ್ರೈವಾರ ಪತ್ರಿಕೆಯಾಗಿ ಹೊಸ ಮುದ್ರಣಾಲಯ ಎಂಪ್ರೆಸ್ ಆಫ್ ಇಂಡಿಯ ಪ್ರೆಸ್‍ನಿಂದ ಅಚ್ಚಾಗತೊಡಗಿತು. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಈ ಪತ್ರಿಕೆ ಜನಜಾಗೃತಿಯನ್ನುಂಟುಮಾಡಲು ಅಪಾರವಾಗಿ ಶ್ರಮಿಸಿತ್ತು.

	1889 ಏಪ್ರಿಲ್ 1ರಿಂದ ಇದು ಸಂಜೆ ದೈನಿಕವಾಗಿ ಪ್ರಕಟವಾಗ ತೊಡಗಿತು. 1905 ಏಪ್ರಿಲ್ 1ರಂದು ಈ ಪತ್ರಿಕೆಯ ಒಡೆತನವನ್ನು ಕಸ್ತೂರಿ ಶ್ರೀನಿವಾಸನ್ ಅವರು ವಹಿಸಿಕೊಂಡರು. ವಿ.ಕೆ. ಕೃಷ್ಣಮೆನನ್ ಅವರು ಈ ಪತ್ರಿಕೆಯ ಯುರೋಪಿನ ವರದಿಗಾರರಾಗಿದ್ದರು. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ 1940 ನವಂಬರ್ 11ರಿಂದ ಈ ಪತ್ರಿಕೆ ಬೆಳಗಿನ ಪತ್ರಿಕೆಯಾಯಿತು. ಆಧುನಿಕ ತಂತ್ರಜ್ಞಾನದಿಂದಾಗಿ ದೇಶದಲ್ಲೇ ಪ್ರಥಮಬಾರಿಗೆ ನಾಲ್ಕು ಬಣ್ಣಗಳಲ್ಲಿ ಮುದ್ರಿಸಬಹುದಾದ ಮುದ್ರಣಯಂತ್ರವನ್ನು ಅಳವಡಿಸಿದ ಕೀರ್ತಿ ಈ ಪತ್ರಿಕೆಯದು. ಅಲ್ಲದೇ ದೇಶದಲ್ಲೇ ಮೊಟ್ಟಮೊದಲಬಾರಿಗೆ ಫೋಟೋ ಟೈಪ್‍ಸೆಟ್ಟಿಂಗ್ ಮುದ್ರಣವನ್ನು ಸ್ಥಾಪಿಸಿದ ಪತ್ರಿಕೆಯೂ ಇದಾಗಿದೆ. ಚೆನ್ನೈನಲ್ಲಿ ಈ ಪತ್ರಿಕೆಯ ಪ್ರಧಾನ ಕಚೇರಿ ಇದೆ. ಕೊಯಮತ್ತೂರು, ಬೆಂಗಳೂರು, ಹೈದರಾಬಾದ್, ಮಧುರೈ, ನವದೆಹಲಿ, ವಿಶಾಖಪಟ್ಟಣಮ್, ತಿರುವನಂತಪುರಮ್, ಕೊಚ್ಚಿ, ವಿಜಯವಾಡ, ಮಂಗಳೂರು ಮತ್ತು ತಿರುಚ್ಚಿರಾಪ್ಪಳ್ಳಿಗಳಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿದ್ದು ರಾಷ್ಟ್ರದ 11 ಕೇಂದ್ರಗಳಿಂದ ಈ ಪತ್ರಿಕೆಯ ಆವೃತ್ತಿ ಪ್ರಕಟಗೊಳ್ಳುತ್ತಿದೆ. ಈಗ ಸು. 400 ಕೋಟಿ ರೂಪಾಯಿ ವಹಿವಾಟಿನ ಈ ಪತ್ರಿಕೆ ಕಸ್ತೂರಿ ಅಂಡ್ ಸನ್ಸ್ ಕಂಪನಿಯ ಆಡಳಿತದಲ್ಲಿದೆ. ಈಗೀನ ಪತ್ರಿಕೆಯ ಇದರ ಈಗಿನ ಸಂಪಾದಕರು ಎನ್.ರಾಮ್. ತನ್ನ ವರದಿ ಹಾಗೂ ಸಂಪಾದಕೀಯ ಬರೆಹಗಳಿಂದ ವ್ಯವಸ್ಥೆಯೊಂದಿಗೆ ಆಗಾಗ ಹೋರಾಟ ನಡೆಸುವ ಈ ಪತ್ರಿಕೆ 125 ವರ್ಷಾಚರಣೆಯನ್ನು ಮಾಡಿದೆ. ಈ ಪತ್ರಿಕೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ(1968). ಸ್ಪೋಟ್ರ್ಸ್ ಸ್ಟಾರ್ (ವಾರಪತ್ರಿಕೆ) ಹಾಗೂ ಫ್ರಂಟ್ ಲೈನ್ (ಪ್ರಾಕ್ಷಿಕ)-ಇವು ಈ ಬಳಗದ ಪ್ರಕಟಣೆಗಳು. ಪರಿಸರಕ್ಕೆ ಸಂಬಂಧಿಸಿದಂತೆ ಪ್ರತಿವರ್ಷ ವಾರ್ಷಿಕೆಗಳನ್ನು (ಎನ್ವಿರಾನ್‍ಮೆಂಟಲ್ ರಿಪೋರ್ಟ್) ಪ್ರಕಟಿಸುತ್ತಿದೆ.	
											(ಯು.ಆರ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ